ಫೆರುಲ ಅಸಫೋಟಿಡ ಎಂಬ ಸಸ್ಯದ ಬೇರನ್ನು ಗಾಯಗೊಳಿಸಿದಾಗ ದೊರೆಯುವ ಗೋಂದುರಾಳ (ಅಸಫೋಟಿಡ) ಇದರ ವಾಸನೆ ವಿಶಿಷ್ಟವಾಗಿದೆ. ಇದನ್ನು ಹಿಂಗು, ರಾಮಠ, ಬಾಹ್ಲೀಕ ಎನ್ನುವುದೂ ಉಂಟು. ಕೊತ್ತಂಬರಿ, ಬ್ರಾಹ್ಮಿ (ಒಂದೆಲಗ ಅಥವಾ ತಿಮರೆ) ಮೊದಲಾದ ಸಸ್ಯಗಳ ಕುಟುಂಬವಾದ ಅಂಬೆಲಿಫೆರಿ (ಏಪಿಯೇಸೀ) ಕುಟುಂಬಕ್ಕೆ ಇಂಗಿನ ಗಿಡ ಸೇರಿದೆ. ಇದರಲ್ಲಿ ಅನೇಕ ಪ್ರಭೇದಗಳಿವೆ. ಗಿಡ 1-1.2 ಮೀ ಎತ್ತರ ಬೆಳೆಯುತ್ತದೆ. ನೆಲದ ಮೇಲಿರುವ ಕಾಂಡ ಮತ್ತು ಎಲೆಗಳು ಬೇಸಿಗೆಯಲ್ಲಿ ಒಣಗಿಹೋದರೂ ಬೇರುಗಂಟು ಮಾತ್ರ ನೆಲದೊಳಗೆ ಅಳಿಯದೆ ಉಳಿಯುತ್ತದೆ. ಮಳೆಗಾಲದಲ್ಲಿ ರೆಂಬೆಗಳು ಮೂಡಿ ಮೇಲೆ ಬೆಳೆದುಕೊಳ್ಳುತ್ತವೆ.

ವ್ಯಾಪಾರದೃಷ್ಟಿಯಿಂದ ಇಂಗಿಗೆ ಬೇಡಿಕೆ ಇರುವುದರಿಂದ ಅದನ್ನು ಕೃಷಿಮಾಡಿ ಬೆಳೆಯುತ್ತಾರೆ. ಹಿಮಾಲಯ, ಕಾಶ್ಮೀರ, ಪಶ್ಚಿಮ ಆಘ್ಘಾನಿಸ್ತಾನ ಮತ್ತು ಪರ್ಷಿಯ ದೇಶಗಳ ಗುಡ್ಡಗಾಡುಗಳ ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿ ಫಲವತ್ತಲ್ಲದ ಭೂಮಿಯಲ್ಲಿ ಇದು ತಾನಾಗಿಯೇ ಬೆಳೆಯುತ್ತದೆ. ಇಂಗಿನ ಗಿಡ ಬೇರುಗಂಟಿನಿಂದ ಮೂಡಿ ಬೆಳೆಯಲು ಪ್ರಾರಂಭವಾದಾಗ ಬೇರಿನ ಮೇಲ್ಭಾಗ ಕಾಣುವಂತೆ ಸುತ್ತಲೂ ಮಣ್ಣನ್ನು ಪ್ರತ್ಯೇಕಿಸಿ ಕಲ್ಲಿಟ್ಟು ಮರೆಮಾಡುತ್ತಾರೆ. ಅನಂತರ ಕಾಂಡವನ್ನು ಕತ್ತರಿಸಿಹಾಕಿ ಬೇರಿನ ಮೇಲ್ಭಾಗದಲ್ಲಿ ಗಾಯಮಾಡುತ್ತಾರೆ. ಗಾಯದಿಂದ ಹಾಲು ಸ್ರವಿಸಿ ಹೆಚ್ಚಾಗುತ್ತದೆ. ಗೋಂದು, ರಾಳ ಇದರ ಬಲವಾದ ವಿಶಿಷ್ಟ ವಾಸನೆಗೆ ಕಾರಣವಾದ ಡೈಸಲ್ಫೈಡುಗಳಿರುವ ಒಂದು ಆರಿಹೋಗುವ ಎಣ್ಣೆಯೂ ಇದರಲ್ಲಿವೆ. ಈ ಗೋಂದುರಾಳವನ್ನು ಸಂಗ್ರಹಿಸಿ ವರ್ತಕರಿಗೆ ಕಳುಹಿಸುತ್ತಾರೆ. ಇಂಥ ಇಂಗು ಬಲು ಉತ್ತಮವಾದುದು. ಬೆಲೆ ಅಧಿಕ. ಅಂಗಡಿಗಳಲ್ಲಿ ಮಾರುವ ಇಂಗು ಮಿಶ್ರಣವಾದುದು. ಇಲ್ಲಿ ಬೇರಿನ ಹಾಲಿನ ಜೊತೆಗೆ ಬೇರನ್ನೂ ಕತ್ತರಿಸಿ ಕುಟ್ಟಿ ಮಿಶ್ರಮಾಡಿ ಉಂಡೆಮಾಡಿ ಸೇರಿಸಿರುತ್ತಾರೆ. ಗಿಡದ ಬೇರಿನ ಮೇಲ್ಭಾಗವನ್ನು ತೆಳುವಾಗಿ ಮೊದಲು ಕತ್ತರಿಸಿ ತೆಗೆಯುತ್ತಾರೆ. ಕತ್ತರಿಸಿದ ಜಾಗದಲ್ಲಿ ರಸ ಸ್ರವಿಸಿ ಹೆಪ್ಪುಗಟ್ಟುತ್ತದೆ. ಬರಿಯ ಗೋಂದನ್ನು ಸಂಗ್ರಹಿಸುವ ಬದಲು ಅದು ಇರುವ ಜಾಗವನ್ನು ತೆಳುವಾಗಿ ಕತ್ತರಿಸಿ ತೆಗೆಯುತ್ತಾರೆ. ಈ ರೀತಿ ತೆಳುವಾದ ಭಾಗಗಳನ್ನು ಬೇರು ಮುಗಿಯುವವರೆಗೂ ಕತ್ತರಿಸಿ ತೆಗೆದು ಗೋಂದು, ಅಂಗಾಂಶ ಎರಡೂ ಹೊಂದಿಕೊಳ್ಳುವ ಹಾಗೆ ಕುಟ್ಟಿ ಉಂಡೆ ಮಾಡುತ್ತಾರೆ. ಇದರ ಜೊತೆ ಗೊಬ್ಬಳಿಯ ಗೋಂದನ್ನು ಮಿಶ್ರಮಾಡುವುದು ಸಾಮಾನ್ಯ. ಇಂಥ ಬೆರಕೆ ಇಂಗು ಅಂಗಡಿಗಳಲ್ಲಿ ದೊರೆಯುತ್ತದೆ. ಇದು ಗಟ್ಟಿ, ಬಣ್ಣ ಕಂದು ಮಿಶ್ರ ಅಥವಾ ಕಂದು. ಭಾರತದಲ್ಲಿ ಇಂಗನ್ನು ಔಷಧಿಗೆ ಬಲುಕಾಲದಿಂದಲೂ ಆಯುರ್ವೇದ ಪಂಡಿತರು ಉಪಯೋಗಿಸುತ್ತಾರೆ. ಅಡಿಗೆಯಲ್ಲಿ ಇದೊಂದು ಅನಿವಾರ್ಯ ಪರಿಕರ. ಇಂಗಿನಲ್ಲಿ ಫೆರುಲಿಕ್ ಆಮ್ಲವೂ  ಗಾಳಿಯಲ್ಲಿಟ್ಟರೆ ಆವಿಯಾಗುವ ಸುಗಂಧ ತೈಲಗಳೂ ಇವೆ. ಕರುಳಲ್ಲಿ ಹೆಚ್ಚಾಗಿ ಗಾಳಿ ಸೇರಿದ್ದರೆ ಇಂಗು ಜೀರ್ಣಕಾರಿ. ಉನ್ಮಾದ ರೋಗಗಳಿಗೂ ಎಡೆ ಕೊಡುವುದುಂಟು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ